ಹೆಲ್ಮೆಟ್ಟಾಯಣ

3 0 0
                                    

ಹೆಲ್ಮೆಟ್ಟು. ತಲೆಯನ್ನ ಕಾಪಾಡಲು ಇರೋ ಸಾಧನವೋ ಅಥವಾ ಪೊಲೀಸರ ಜೋಬು ದಪ್ಪ ಮಾಡಲು ಇರೋ ದಾರಿಯೋ ತಿಳಿಯದಾಗಿದೆ.

ಪ್ರತೀ ತಿಂಗಳ ತುದಿಯಲ್ಲಿ ಮೈಸೂರಿನ ದೊಡ್ಡ ದೊಡ್ಡ ರಸ್ತೆಗಳಲ್ಲಿ ನಡೆಯುವ ಈ 'ಹೆಲ್ಮೆಟ್ ಬೇಟೆ' ನೋಡಲು ನಮ್ಮ ಎರಡೂ ಕಣ್ಣು ಸಾಲದು, ಹಣ ಎಣಿಸಲು ಟ್ರಾಫಿಕ್ ಪೋಲೀಸರ ಎರಡೂ ಕೈಗಳು ಸಾಲವು ಎಂದರೆ ಅತಿಶಯವಲ್ಲ.

ಎಲ್ಲೋ ಕೆಲವು ಸತ್ಯಹರಿಶ್ಚಂದ್ರನ ವಂಶದವರು ಸಿಕ್ಕಿಬಿದ್ದಾಗ ತೆಪ್ಪಗೆ ದಂಡ ಕಟ್ಟಿ ಹೋದರೆ, "ಅಯ್ಯೋ ಅಷ್ಟೊಂದು ಯಾಕೆ ಕಟ್ಟುವುದು?" ಎಂದು ಪೋಲೀಸರ ಕೈ 'ಬೆಚ್ಚಗೆ' ಮಾಡಿ ಓಡುವವರೇ ಹೆಚ್ಚು. ಆದರೆ ಒಳ್ಳೆಯ ಮನುಷ್ಯರಂತೆ ಹೆಲ್ಮೆಟ್ ಧರಿಸಿ ಹೋಗುವವರು ಮಾತ್ರ ಬೆರಳೆಣಿಕೆಯಷ್ಟು. ಹಿಂದಿನ ಸವಾರರು ಬರೀ ತಲೆಯಲ್ಲಿ ಬರುವುದು, ಬಿದ್ದರೆ ಹೆಲ್ಮೆಟ್ ತಲೆಯನ್ನು ಕಾಪಾಡುವುದಿರಲಿ, ಅದೇ ತಲೆಯನ್ನು ಹೋಳು ಮಾಡದಿರಲಿ ಎಂದು ದೇವರನ್ನ ಕೇಳಿ ಓಡಿಸಬೇಕು ಎಂಬಂಥ ತಲೆ ಟೊಪ್ಪಿಗೆಗಳ ಜಾತ್ರೆಯೋ ಜಾತ್ರೆಯೇ ಎಲ್ಲಾ ಕಡೆ.

ಈಗೇಕೆ ಈ ಹೆಲ್ಮೆಟ್ (ತಲೆ)ಹರಟೆ ಎಂದಿರೆ? ಅಯ್ಯೋ! ನಾನೂ ಕೂಡಾ ಈ ಹೆಲ್ಮೆಟ್ ಬೇಟೆಗೆ ಬಲಿಪಶು ಆಗಿಬಿಟ್ಟಿದ್ದೆ ಒಂದು ಸರ್ತಿ. ಏನಾಯ್ತು ಎಂಬ ನಿಮ್ಮ ಸಮಸ್ಯೆಗೆ ಪರಿಹಾರ ಕೆಳಗಿದೆ, ಓದಿ.

ಒಂದಿನ ಎಂದಿನಂತೆ ಕಾಲೇಜಿನ ತಲೆನೋವು ಕಾಲೇಜಿನಲ್ಲೇ ಬಿಟ್ಟು ಮನೆ ಕಡೆ ಭರ್ರನೆ ಹೋಗುತ್ತಿರಬೇಕಾದರೆ, 'ಮಾಮ' ಎಂದು ಮುದ್ದಿನಿಂದ ಕರೆಸಿಕೊಳ್ಳುವ ಟ್ರಾಫಿಕ್ ಪೊಲೀಸರು ಮನಬಂದಂತೆ ಸವಾರರನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿರುವುದು ಕಂಡಿತು. 'ಅಬ್ಬಾ, ನನ್ನೆಲ್ಲಾ ದಾಖಲೆಗಳು ಸರಿ ಇದಿಯೇ? ಹೆಲ್ಮೆಟ್ ತಲೆ ಮೇಲೆ ಇದಿಯೇ?' ಎಂಬಂತ ಹುಚ್ಚು ಯೋಚನೆ ಬಂದಿತು, ಎಲ್ಲಾ ಸರಿ ಇದೆ ಎಂದು ಗೊತ್ತಿದರೂ.

ಆದರೆ, 'ಗಾಡಿ ಬದಿಗೆ ಹಾಕು' ಎಂದು ಒಬ್ಬ ಪೋಲೀಸಪ್ಪ ಕೈ ಮಾಡಿದ. ನನಗಲ್ಲ ಎಂದುಕೊಂಡು ಅಕ್ಕ ಪಕ್ಕ ನೋಡಿದೆ ಮತ್ತು ಅಲ್ಲಿ ಇದ್ದುದು ನಾನು ಒಬ್ಬಳೇ ಎಂದು ಗೊತ್ತಾಯ್ತು. ಗಟ್ಟಿ ಮನಸ್ಸು ಮಾಡಿ ಗಾಡಿ ಬದಿಗೆ ಹಾಕಿದೆ.
ಪೊಲೀಸಪ್ಪನು 'ಅದೇನನ್ನೋ' ತೆಗೆದುಕೊಂಡು ನನ್ನ ಗಾಡಿಯ ನೋಂದಾಯಿತ ಸಂಖ್ಯೆಯನ್ನು ಒತ್ತಿದ.
ಈ 'ಅದೇನೋ' ಇದಿಯಲ್ಲ? ಅದು ನೋಡಲು ಈ ಬಸ್ಸಿನಲ್ಲಿ ಟಿಕೇಟು ಕೊಡುವ ಯಂತ್ರದಂತೆ ಇತ್ತು.

"ಅದೇನು?" ಎಂದು ನಾನು ಕೇಳಲಾಗಿ, ಆ ಮಾಯ-ಮಂತ್ರದಂಥ ಯಂತ್ರದಲ್ಲಿ ನಮ್ಮ ಗಾಡಿ ಸಂಖ್ಯೆ ಒತ್ತಿದರೆ ಸಾಕು, ಆ ಗಾಡಿಯ ಮೇಲೆ ದಾಖಲಾದ ಯಾವುದೇ ಕೇಸು, ಎಷ್ಟು ದಂಡ ಕಟ್ಟಬೇಕು ಎಲ್ಲವೂ ಬರುವುದು ಎಂಬ ಉತ್ತರ ಬಂದಿತು. ಕೇಳಿ ತಲೆ ಗಿರ್ರ್ ಎಂದಿತು.

"ಹಾ! ನೋಡಮ್ಮ, ನಿನ್ನ ಗಾಡಿ ಮೇಲೆ ಎಂಟು ಕೇಸಿದೆ, ಹನ್ನೆರಡು ಸಾವಿರ ದಂಡ!" ಎಂದ ಆ ಪೊಲೀಸಪ್ಪ, ದೊಡ್ಡ ತಿಮಿಂಗಲವೇ ಬಿತ್ತು ನನ್ನ ಬಲೆಯಲ್ಲಿ ಎಂದು ಬೀಗುತ್ತಾ.

ನನ್ನ ಎದೆ ಧಸಕ್ಕೆಂದಿತು. ಇದು ಸಾಧ್ಯವೇ ಇರಲಿಲ್ಲ. ನಾನು ಸ್ವಲ್ಪ ಅತೀ ಎನ್ನುವಷ್ಟೇ ಟ್ರಾಫಿಕ್ ರೂಲುಗಳನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸುವ ಪೈಕಿ.
ಗಾಬರಿಗೆ ನಾಲಗೆಯೇ ಹೊರಳಲೊಲ್ಲದು!

'ಸಾರ್?' ಎಂದಷ್ಟೇ ನನ್ನ ಬಾಯಿಂದ ಬಂತು.

ನನ್ನ ಗಾಬರಿ ನೋಡಿ ಪೊಲೀಸಪ್ಪನ ತುಟಿಯಲ್ಲಿ ಸಂತೃಪ್ತಿಯ ಕಿರುನಗೆ ಒಂದು ಅರಳುವುದು ಕಂಡಿತು.

"ಹಾ! ದತ್ತಾತ್ರೇಯ ಅಲ್ಲವೇ ಈ ಗಾಡಿ ಮಾಲೀಕರು? ಗಾಡಿ ಸಂಖ್ಯೆ ೨೨೨೪ ಅಲ್ಲವೇ? ಎಲ್ಲಿ. ಗಾಡಿ ಕೀ ಕೊಡಿಲ್ಲಿ. ದಂಡ ಹೆಂಗೆ ಕಟ್ಟುವೆ?" ಎಂದು ರಾಮಾಯಣ ಶುರು ಮಾಡಿದ.

"ಹಾ? ಇರಿ ಇರಿ. ದತ್ತಾತ್ರೇಯ? ೨೨೨೪? ಅದು ನನ್ನ ಗಾಡಿ ಅಲ್ಲವಲ್ಲ?" ಎಂದೆ, ಏನು ನಡೆಯುತ್ತಿದೆ ಎಂಬ ಗೊಂದಲದಲ್ಲಿ.

"ಹಾ?? ೨೨೨೪ ನಿನ್ನದಲ್ಲವೇ? ಸರಿ ಇದಿಯಲ್ಲ?"-ಪೊಲೀಸಪ್ಪ.

ನನಗೆ ಈಗ ಏನು ನಡೆಯುತ್ತಿದೆ ಎಂಬ ಅರಿವು ಮೂಡಿತು.
ನನ್ನ ಗಾಡಿಯು ೨೪೨೪ ಸಂಖ್ಯೆದ್ದಾಗಿದ್ದು, ಪೊಲೀಸಪ್ಪನು ಕೋಟ ಪೂರೈಸೋ ಭರದಲ್ಲಿ ಗಾಡಿ ಸಂಖ್ಯೆ ಸರಿಯಾಗಿ ನಮೂದಿಸಿರಲಿಲ್ಲ.

'ಇಲ್ಲಾ ಸ್ವಾಮಿ! ಅದು ನನ್ನ ಗಾಡಿಯಲ್ಲ' ಎಂದು ಅವರನ್ನು ಮತ್ತೆ ಸರಿಯಾಗಿ ನೋಡಿಸಲು ಅವರಿಗೆ ತಮ್ಮ ತಪ್ಪಿನ ಅರಿವಾಯ್ತು.

"ಅಯ್ಯೋ! ನೋಡಿ ಮೇಡಂ! ಸರಿಯಾಗ್ ನೋಡದೇನೆ ನಿಮ್ಮ ತಲೆ ಮೇಲೆ ಹನ್ನೆರಡು ಸಾವಿರ ದಂಡ ಬಂದು ಬೀಳ್ತಿತ್ತು ಈಗ" ಎಂದು ಬೆಬ್ಬೆಬ್ಬೆ ಮಾಡಿದ ಆತ.

ಕೊನೆಗೆ, ಸರಿಯಾದ ಸಂಖ್ಯೆ ನಮೂದಿಸಿ ನೋಡಲು ಊಹಿಸಿದಂತೆಯೇ ಯಾವುದೇ ಕೇಸು ದಾಖಲಾಗಿರಲಿಲ್ಲ. ಬೇರೆಲ್ಲ ದಾಖಲೆಗಳನ್ನು ನೋಡಿ,
"ಸರಿ ಹೋಗು!" ಎಂದು ಬಿಟ್ಟರು ಎಂಬಲ್ಲಿಗೆ, ಹೆಲ್ಮೆಟ್ ಪ್ರಹಸನ ಸುಖಾಂತ್ಯ ಕಂಡಿತ್ತು.
ಉಸ್ಸೆದು ಮನೆ ಕಡೆ ನನ್ನ ಪ್ರಯಾಣ ಮುಂದುವರಿದಿತ್ತು.

***

Has llegado al final de las partes publicadas.

⏰ Última actualización: Mar 08, 2021 ⏰

¡Añade esta historia a tu biblioteca para recibir notificaciones sobre nuevas partes!

Life: The stories Donde viven las historias. Descúbrelo ahora